Site icon PowerTV

ಮತ್ತಿಬ್ಬರು ಶಾಸಕರು ಜೆಡಿಎಸ್​ಗೆ ಗುಡ್​ಬೈ?

ಮಂಡ್ಯ : ಉಪಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಫಾಗಿದೆ. ಆದರೆ, ಇನ್ನೂ ಕೂಡ ಆಪರೇಷನ್ ಕಮಲ ಮುಂದುವರೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಮಂಡ್ಯದ ಇಬ್ಬರು ಜೆಡಿಎಸ್ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಅನ್ನೋ ಸುದ್ದಿ! 

ಬೈ ಎಲೆಕ್ಷನ್​​ನಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಜೆಡಿಎಸ್​ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಜೆಡಿಎಸ್ ತೊರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಮೊದಲೇ ಪಕ್ಷ ತೊರೆಯಲು ಚಿಂತನೆ ನಡೆಸಿದ್ದರು. ಆದರೆ ಭವಿಷ್ಯದ ಭಯದಿಂದ ಪಕ್ಷ ತೊರೆಯಲು ಹಿಂದೇಟು ಹಾಕಿದ್ದರು. ಇದೀಗ ಕೆ.ಆರ್.ಪೇಟೆ ಫಲಿತಾಂಶದಿಂದ ಜೆಡಿಎಸ್ ತೊರೆಯುವ ಶಾಸಕರಿಗೆ ವಿಶ್ವಾಸ ಮೂಡಿದೆ. ಅಷ್ಟೇ ಅಲ್ಲ ಸುರೇಶ್ ಗೌಡ ಮೊನ್ನೆಯಷ್ಟೇ ಸಿಎಂ ಬಿಎಸ್​ವೈ ಕಾಲಿಗೆರೆಗಿ ನಮಸ್ಕರಿಸಿದ್ದಾರೆ.

ಕೆಆರ್​ಎಸ್  ಡಿಸ್ನಿಲ್ಯಾಂಡ್ ಯೋಜನೆ ಸೇರಿದಂತೆ ಶ್ರೀರಂಗಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ರವೀಂದ್ರ ಶ್ರೀಕಂಠಯ್ಯರನ್ನು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಿರ್ಲಕ್ಷಿಸಿದ್ದರು ಎಂಬ ಆರೋಪವೂ ಇದೆ. ಇನ್ನು ಸಕ್ಕರೆ ನಾಡಿನಲ್ಲಿ ಬಿಜೆಪಿ ಸುಭದ್ರವಾಗಿ ನೆಲೆಯೂರಬೇಕಾದ್ರೆ ಪ್ರಭಾವಿ ಮುಖಂಡರ ಅಗತ್ಯವಿದೆ. ಆದ್ದರಿಂದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಚಿಂತನೆ ಮಾಡಿದೆ ಎನ್ನಲಾಗುತ್ತಿದೆ. ಇದೀಗ ಜೆಡಿಎಸ್ ಶಾಸಕರು ಬಿಜೆಪಿ ಸೇರಲು  ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

Exit mobile version