ಬೆಂಗಳೂರು : ಇತ್ತೀಚಗಷ್ಟೇ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದ ಕೆ.ಸಿ ರಾಮಮೂರ್ತಿ ಮತ್ತೊಮ್ಮೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 12ರಂದು ರಾಜ್ಯಸಭೆಗೆ ಚುನಾವಣೆ ನಡೆಯಬೇಕಿತ್ತು. ಆದರೆ, ರಾಮಮೂರ್ತಿಯನ್ನು ಹೊರತುಪಡಿಸದರೆ ಇಬ್ಬರು ಪಕ್ಷೇತರರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರಿಬ್ಬರ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂ. ಕೆ ವಿಶಾಲಾಕ್ಷಿ ಘೋಷಿಸಿದ್ದಾರೆ.
ಇನ್ನು ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿರುವ ರಾಮಮೂರ್ತಿಯವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಕೆ.ಸಿ. ರಾಮಮೂರ್ತಿ ಮಾತನಾಡಿ, ಅವಿರೋಧ ಆಯ್ಕೆ ಮಾಡಿದ ಎಲ್ಲರಿಗೂ, ಬಿಜೆಪಿ ನಾಯಕರು, ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಬಿಜೆಪಿಗೆ ಬಂದ್ದಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು ಬಿಜೆಪಿ ಸ್ನೇಹಿತರ ಜೊತೆ ಚೆನ್ನಾಗಿದ್ದೆ. ಈಗ ಅವರ ಜೊತೆಯಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.