ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ‘ಪೈಲ್ವಾನ್’ ಜೊತೆ ಕೈ ಜೋಡಿಸಿದ್ದಾರೆ. ಅರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮಾಡ್ತಿದ್ದಾರಾ ಅನ್ನೋ ಕುತೂಹಲದ ಪ್ರಶ್ನೆ ನಿಮ್ಮಲ್ಲಿ ಮೂಡಿರೋದು ಸಹಜ. ಆದ್ರೆ, ಪೈಲ್ವಾನ್ ಕಿಚ್ಚನ ಜೊತೆ ನಿಖಿಲ್ ಸದ್ಯ ಸಿನಿಮಾ ಮಾಡ್ತಿಲ್ಲ. ಬದಲಾಗಿ ಪೈಲ್ವಾನ್ ಡೈರೆಕ್ಟರ್ ಕೃಷ್ಣನ ಜೊತೆ ನಿಖಿಲ್ ಸಿನಿಮಾ ಮಾಡ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಸುದ್ದಿ ಹರಿದಾಡಿತ್ತು. ಈಗ ಸ್ವತಃ ನಿಖಿಲ್ ದಿನಪತ್ರಿಕೆಯೊಂದಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
‘ನನ್ನ ಕಳೆದ ಎರಡು ಚಿತ್ರಗಳಿಗಿಂತ ಈ ಬಾರಿ ಕೊಂಚ ವಿಭಿನ್ನ ಕಾನ್ಸೆಪ್ಟ್ ಕೈಗೆತ್ತಿಕೊಂಡಿದ್ದೇನೆ. ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕಥೆ ರೆಡಿ ಮಾಡಲಾಗಿದೆ. ಕೃಷ್ಣ ಈಗಾಗಲೇ ಮೂರು ವಿಭಿನ್ನ ಸಿನಿಮಾಗಳನ್ನು ಮಾಡಿದ್ದಾರೆ. ನನ್ನ ಎರಡು ಸಿನಿಮಾಗಳು ಕೂಡ ವಿಭಿನ್ನವಾಗಿದ್ದವು. ಹೀಗಾಗಿ ನಾವು ಹೊಸ ವಿಷಯ ಕೈಗೆತ್ತಿಕೊಂಡು ಸಿನಿಮಾ ಮಾಡ್ತಿದ್ದೀವಿ. ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ” ಅಂತ ನಿಖಿಲ್ ಹೇಳಿದ್ದಾರೆ.
ಇನ್ನು ಕೃಷ್ಣ, ”ಈ ಸಿನಿಮಾ ಬಗ್ಗೆ ಮಾತನಾಡಲು ಇನ್ನೂ ಸಮಯವಿದೆ. ನಿಖಿಲ್ ಮತ್ತು ನನಗೂ ಅದು ವಿಶೇಷ ಸಿನಿಮಾವಂತೂ ಆಗಲಿದೆ. ನೈಜ ಘಟನೆ ಆಧರಿಸಿದ ಕಥೆ. ನಿಖಿಲ್ ಪಾತ್ರದ ಬಗ್ಗೆ ವರ್ಕ್ ಮಾಡುತ್ತಿದ್ದೇವೆ” ಅಂದಿದ್ದಾರೆ.
2016ರಲ್ಲಿ ಜಾಗ್ವಾರ್ ಸಿನಿಮಾ ಮೂಲಕ ನಿಖಿಲ್ ಸಿನಿಜರ್ನಿ ಶುರುಮಾಡಿದವರು. ಈ ವರ್ಷ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾ ಬಂದಿದೆ. ಅಲ್ಲದೆ ದರ್ಶನ್ ಅಭಿನಯದ ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ಜನರಿಗೆ ಹತ್ತಿರವಾಗಿದ್ದಾರೆ. ಈ ನಡುವೆ ರಾಜಕೀಯದಲ್ಲೂ ಬ್ಯುಸಿ ಇರುವ ಅವರು ಸಿನಿಮಾ ಮತ್ತು ರಾಜಕೀಯ ಎರಡನ್ನೂ ಸಮದೂಗಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.