ಬೆಂಗಳೂರು : ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ಹಾಗೂ ತನ್ನ ನಡುವೆ ಕೆಲಸದ ವಿಷಯದಲ್ಲಿ ಮನಸ್ತಾಪ ಆಗಿರುವುದು ಸತ್ಯ ಅಂತ ದರ್ಶನ್ ಅವರ ಮ್ಯಾನೇಜರ್ ಆಗಿದ್ದ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
”ನಮ್ಮ ಡಿ ಬಾಸ್ ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ) ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿ ಬಾಸ್ ರವರ ಹೆಸರಲ್ಲಿ ಯಾವುದೇ ವ್ಯವಹಾರ ಮಾಡದಿರಿ” ಅಂತ ಡಿ ಕಂಪನಿ ಬುಧವಾರ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ ಸ್ವತಃ ಶ್ರೀನಿವಾಸ್ ಅವರು ಕೂಡ ಟ್ವೀಟ್ ಮೂಲಕ ದರ್ಶನ್ ಬಳಿ ಕೆಲಸ ಬಿಟ್ಟಿರುವುದಾಗಿ ತಿಳಿಸಿದ್ದಾರೆ.
“ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಎಲ್ಲಾ ಮೀಡಿಯಾ ಸಂಸ್ಥೆಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ದರ್ಶನ್ ತೂಗುದೀಪ ರವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ. ಆದ ಕಾರಣ ನಾನು ದಿನಾಂಕ 18-09-2019 ರಿಂದ ಅವರ ಬಳಿ ಕೆಲಸ ಬಿಟ್ಟಿರುತ್ತೇನೆ. ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ” ಅಂತ ಶ್ರೀನಿವಾಸ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.