ಬೆಂಗಳೂರು : ಹಾಲು, ನ್ಯೂಸ್ ಪೇಪರ್ನಂತೆ ಮನೆ-ಮನೆಗೆ ಮದ್ಯ ವಿತರಣೆ ಮಾಡುವ ಹುಚ್ಚು ಚಿಂತನೆಯನ್ನು ಸರ್ಕಾರ ಕೈ ಬಿಟ್ಟಿದೆ. ಪವರ್ ಟಿವಿ ಈ ಬಗ್ಗೆ ಸುದ್ದಿ ಪ್ರಸಾರ ಮಾಡ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.
ಮನೆ ಬಾಗಿಲಿಗೆ ಮದ್ಯ ಪೂರೈಸುವ ಮೊಬೈಲ್ ಎಣ್ಣೆ ಅಂಗಡಿ ಆರಂಭಿಸುವ ಚಿಂತನೆ ಇದೆ ಅಂತ ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿಕೆ ನೀಡಿದ್ದರು. ಈ ಬಗ್ಗೆ ತಕ್ಷಣವೇ ಸುದ್ದಿ ಪ್ರಸಾರ ಮಾಡಿ ಸರ್ಕಾರವನ್ನು, ಅಬಕಾರಿ ಸಚಿವರನ್ನು ಎಚ್ಚರಿಸುವ ಕೆಲಸವನ್ನು ಪವರ್ ಟಿವಿ ಮಾಡಿತ್ತು. ಪವರ್ ಟಿವಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿತಯೂರಪ್ಪ ಸಚಿವ ಹೆಚ್ .ನಾಗೇಶ್ರವರಿಗೆ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದೀಗ ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಂಡಿರುವ ಸಚಿವ ನಾಗೇಶ್ ರಾಜ್ಯದ ಮಹಿಳೆಯರ ಕ್ಷಮೆ ಕೋರಿದ್ದಾರೆ. ತಮ್ಮ ಹೇಳಿಕೆ ವಾಪಸ್ ಪಡೆಯೋದಾಗಿ ಹೇಳಿರುವ ಸಚಿವರು, ರಾಜ್ಯದ ಮಹಿಳೆಯರ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಕಳ್ಳಭಟ್ಟಿ ತಡೆಗಟ್ಟಲು ಬೇರೆ ಬೇರೆ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿರುವ ಅವರು, ರಾಜ್ಯದ ಹಲವು ಕಡೆಗಳಲ್ಲಿ ಕಳ್ಳಭಟ್ಟಿ ಇರುವ ಮಾಹಿತಿಯಿದೆ. ಈ ಬಗ್ಗೆ ಅಧಿಕಾರಿಗಳಿಗೆ ಖಡಕ್ಕಾಗಿ ಮಾಹಿತಿಯನ್ನು ನೀಡುತ್ತೇನೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಳ್ಳಭಟ್ಟಿ ತಡೆಗೆ ಕ್ರಮ ಕೈಗೊಳ್ಳಬೇಕು. ಕಳ್ಳಭಟ್ಟಿಯಿಂದ ಆಗುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು . ಈ ಬಗ್ಗೆ ಅಭಿಯಾನ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಅಂದಿದ್ದಾರೆ.
ಆನ್ಲೈನ್ನಲ್ಲಿ ಎಣ್ಣೆ ಮಾರಾಟದ ವ್ಯವಸ್ಥೆ ಜಾರಿ ಮಾಡಲ್ಲ. ಗುಜರಾತ್, ಮಹಾರಾಷ್ಟ್ರದಲ್ಲಿ ಆನ್ಲೈನ್ನಲ್ಲಿ ಮಾರಾಟ ಮಾಡಲಾಗ್ತಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್ಲೈನ್ ಮೂಲಕ ಮದ್ಯ ಮಾರಾಟವಿಲ್ಲ. ಆನ್ಲೈನ್ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದೇ ಇಲ್ಲ. ನಿನ್ನೆ ನನಗೆ ಸ್ವಲ್ಪ ಮಾಹಿತಿಯ ಕೊರತೆ ಇತ್ತು .ಅದರಿಂದ ತಪ್ಪಾಗಿದೆ ನನ್ನನ್ನು ಕ್ಷಮಿಸಿ ಅಂದಿದ್ದಾರೆ.
ಮಹಿಳೆಯರ ಬಗ್ಗೆ ನಮಗೆ ಅಪಾರ ಅಭಿಮಾನ, ಗೌರವ ಇದೆ. ಮದ್ಯಪಾನದ ವಿರುದ್ಧ ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ . ತಾಂಡಾಗಳಲ್ಲಿ ಕಳ್ಳಬಟ್ಟಿ ತಡೆಗೆ ಕ್ರಮ ಕೈಗೊಳ್ಳುತ್ತೇವೆ . ಸಂಚಾರಿ ವಾಹನಗಳ ಮೂಲಕ ಮದ್ಯ ಮಾರಾಟ ಕೇವಲ ಪ್ರಸ್ತಾಪದ ಹಂತದಲ್ಲಿದೆ. ಇಲಾಖೆಯ ಪ್ರಸ್ತಾವನೆ ಸಿಎಂ ಗಮನಕ್ಕೆ ತಂದು ಜಾರಿ ಮಾಡಬೇಕಾಗುತ್ತದೆ. ನಾನು ನನ್ನ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ. ರಾಜ್ಯದ ಮಹಿಳೆಯರಿಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
