ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಹೊಸಬರ ಸಿನಿಮಾಗಳು ಒಂದರ ಹಿಂದೊಂದರಂತೆ ರಿಲೀಸ್ ಆಗ್ತಿವೆ. ಸ್ಟಾರ್ ನಟರ ಸಿನಿಮಾಗಳಿಗೆ ಸಿಗುವಂಥಾ ಬಹು ದೊಡ್ಡ ಯಶಸ್ಸು ಹೊಸಬರ ಚಿತ್ರಗಳಿಗೂ ಸಿಗ್ತಿವೆ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಅನ್ನುವಂತೆ ಸ್ಟಾರ್ಗಳು, ಹೊಸಬರ ಚಿತ್ರಗಳಿಂದ ಚಂದನವನ ಬಹು ಎತ್ತರಕ್ಕೆ ಬೆಳೆಯುತ್ತಿದೆ. ಹೊಸಬರು ನಿರೀಕ್ಷೆಗೂ ಮೀರಿದ ಸಿನಿಮಾಗಳನ್ನು ನೀಡುತ್ತಿದ್ದು, ಆ ಸಾಲಿಗೀಗ ‘ಕಪಟ ನಾಟಕ ಪಾತ್ರಧಾರಿ’ ಚಿತ್ರ ಸೇರುವ ಭರವಸೆ ಮೂಡಿದೆ. ಆ ಒಂದು ಭರವಸೆಗೆ ಕಾರಣ ರಿಲೀಸ್ ಆಗಿರುವ ಹಾಡುಗಳು..!
ಹೌದು, ‘ಕಪಟ ನಾಟಕ ಪಾತ್ರಧಾರಿ’ ಸಿನಿಮಾ ಸದ್ಯ ಹಾಡುಗಳಿಂದ ಸದ್ದು ಮಾಡ್ತಿದೆ. ಇಂದು ಪವರ್ ಟಿವಿಯಲ್ಲಿ ‘ಹಸಿದ ಶಿಖನು ಬೇಟೆಯಾಡಿದೆ…’ ಎಂಬ ಹಾಡನ್ನು ಬಿಡುಗಡೆ ಮಾಡಲಾಯಿತು. ಪವರ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮಾ ಆಡಿಯೋ ಲಾಂಚ್ ಮಾಡಿ ಚಿತ್ರತಂಡಕ್ಕೆ ಪವರ್ ಟಿವಿ ಪರವಾಗಿ ಶುಭ ಹಾರೈಸಿದರು. ಡೈರೆಕ್ಟರ್ ಕ್ರಿಶ್, ಮ್ಯೂಸಿಕ್ ಡೈರೆಕ್ಟರ್ ಆದಿಲ್ ನಡಾಫ್ , ಗಾಯಕಿ ಇಶಾ ಸುಚಿ ಮತ್ತಿತರರು ಉಪಸ್ಥಿತರಿದ್ದರು.
ಇಶಾ ಸುಚಿ ಹಾಡಿರುವ, ಇಂದು ಬಿಡುಗಡೆಯಾಗಿರುವ ‘ಹಸಿದ ಶಿಖನು ಬೇಟೆಯಾಡಿದೆ…’ ಹಾಡಿಗೂ ಮುನ್ನ ಕಳೆದ ತಿಂಗಳು ರಿಲೀಸ್ ಆಗಿರುವ ‘ ಯಾಕೆ ಅಂತ ಗೊತ್ತಿಲ್ಲ ಕಣ್ರೀ…’ ಅನ್ನೋ ಹಾಡು ಸಾಕಷ್ಟು ಜನಪ್ರಿಯವಾಗಿದೆ. ಹಸಿದ ಶಿಖನು ಬೇಟೆಯಾಡಿದೆ ಹಾಡು ಕೂಡ ಸಖತ್ ಸೌಂಡು ಮಾಡೋದ್ರಲ್ಲಿ ನೋ ಡೌಟ್.
‘ಕಪಟ ನಾಟಕ ಪಾತ್ರಧಾರಿ’ ಕ್ರಿಶ್ ಆ್ಯಕ್ಷನ್ ಕಟ್ ಹೇಳಿರುವ ಚೊಚ್ಚಲ ಸಿನಿಮಾ. ಈ ಚಿತ್ರದ ನಾಯಕ ‘ಹುಲಿರಾಯ’ ಸಿನಿಮಾ ಖ್ಯಾತಿಯ ಬಾಲು ನಾಗೇಂದ್ರ. ನಾಯಕಿ ಸಂಗೀತಾ ಭಟ್. ಇದು ರಿಕ್ಷಾ ಚಾಲಕ ಹಾಗೂ ಮಧ್ಯಮ ವರ್ಗದ ಹುಡುಗಿಯ ಪ್ರೇಮಕಥೆ.. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಮೂವಿ ಎಂದಷ್ಟೇ ತಿಳಿಸಿರುವ ಡೈರೆಕ್ಟರ್ ಚಿತ್ರದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಇನ್ನು ಚಿತ್ರಕ್ಕೆ ಆದಿಲ್ ನಡಾಫ್ ಸಂಗೀತದ ಬಲ ತುಂಬಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಹರಿಚರಣ್, ಸಿದ್ಧಾರ್ಥ್ ಬೆಳ್ಮಣ್ಣು, ಮಾಧುರಿ ಶೇಷಾದ್ರಿ, ಇಶಾ ಮತ್ತಿತರರು ಹಾಡಿದ್ದಾರೆ. ಪರಮೇಶ್ರವರ ಕ್ಯಾಮರಾ ಕೈಚಳಕವಿದೆ. ಉಗ್ರಂ, ಕೆಜಿಎಫ್ ಸಿನಿಮಾಗಳ ಸಂಕಲನಕಾರ ಶ್ರೀಕಾಂತ್ ಅವರೇ ‘ಕಪಟ ನಾಟಕ ಪಾತ್ರಧಾರಿ’ಯ ಸಂಕಲನಕಾರರು.
ಶೀಘ್ರದಲ್ಲೇ ಟ್ರೈಲರ್ ಮತ್ತು ಇನ್ನುಳಿದ ಹಾಡುಗಳು, ಟ್ರೈಲರ್ ಅನ್ನು ಲಾಂಚ್ ಆಗಲಿದ್ದು, ಆದಷ್ಟು ಬೇಗ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
