Site icon PowerTV

‘ಪೈಲ್ವಾನ್​’@46 – ಕಿಚ್ಚನ ಸಿನಿಮಾಗಳ ಮೂಲಕವೇ ಪವರ್​ ಟಿವಿಯಿಂದ ವಿಶ್​..!

ಚಂದನವನಕ್ಕೆ ಹೊಸ ‘ಸ್ಪರ್ಶ’ ನೀಡಿದ ‘ಚಂದು’. ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ‘ಮಾಣಿಕ್ಯ’ ಅಭಿನಯ ಚಕ್ರವರ್ತಿ ‘ಕಿಚ್ಚ’ ಸುದೀಪ್​ಗೆ ಇಂದು 46ರ ಹುಟ್ಟುಹಬ್ಬದ ಸಂಭ್ರಮ.

ಸ್ಯಾಂಡಲ್​ವುಡ್​ನ ‘ಧಮ್​’ ಏನು ಅಂತ ತೋರಿಸುವ ಮೂಲಕ ಬಾಲಿವುಡ್, ಟಾಲಿವುಡ್ ಮಂದಿಗೂ ‘ಆಟೋಗ್ರಾಫ್​’ ನೀಡುವ ಮಟ್ಟಕ್ಕೆ ಬೆಳೆದಿರುವ, ಅಷ್ಟೇ ಏಕೆ ಹಾಲಿವುಡ್​ಗೂ ‘ಸೈ’ ಅನಿಸಿಕೊಂಡಿರುವ ‘ರನ್ನ’ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಕನ್ನಡದ ಬಾದ್​ ಷಾ ಅಭಿಮಾನಿಗಳ ಜೊತೆ ಸೇರಿ ಕೇಕ್ ಕತ್ತರಿಸಿ ಪ್ರೀತಿಯಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನೇರ ನುಡಿಯ ಮಾತುಗಾರ, ‘ಜಸ್ಟ್​ ಮಾತ್ ಮಾತಲ್ಲೇ’ ಮೋಡಿ ಮಾಡೋ ‘ನಲ್ಲ’. ಅಭಿಮಾನಿಗಳ ಹೃದಯದ ‘ಮಹಾರಾಜ’, ‘ಸ್ವಾತಿ ಮುತ್ತಿ’ನ ಮಳೆಗೆರೆದು ಅಭಿಮಾನಿಗಳ ಹೃದಯ ಅನ್ನುವ ‘ಶಾಂತಿ ನಿವಾಸ’ದಿ ನೆಲೆಸಿರುವ ‘ಪಾರ್ಥ’ನ ಜನ್ಮದಿನವೆಂದ್ರೆ ಕೇಳಬೇಕೆ? ಅದು ಹಬ್ಬ…! ಗಣೇಶ ಚತುರ್ಥಿ ಟೈಮ್​ನಲ್ಲೇ ಸುದೀಪ್ ಹುಟ್ಟುಹಬ್ಬ ಬಂದಿರೋದ್ರಿಂದ ಅಭಿಮಾನಿಗಳಿಗೆ ಡಬಲ್ ಧಮಾಕ..!

‘ವಾಲಿ’ಯಾಗಿ ದ್ವಿಪಾತ್ರದಿ ನಟಿಸಿ ಚಿತ್ರರಸಿಕರ ಮನಗೆದ್ದ ‘ನಂದಿ’. ‘ಕಿಚ್ಚ-ಹುಚ್ಚ’ನಾಗಿ ಅಭಿಮಾನದ ‘ಹುಚ್ಚೆ’ಬ್ಬಿಸಿದ ‘ಬಚ್ಚನ್​’. ‘ಮುಸ್ಸಂಜೆ ಮಾತ’ಲ್ಲಿ ಆರ್ ಜೆಯಾಗಿ, ‘ಅಂಬಿ ನಿಂಗ್​ ವಯಸ್ಸಾಯ್ತೋ’ ಸಿನಿಮಾದಲ್ಲಿ ಯುವ ಅಂಬಿಯ ಪಾತ್ರ. ಹೀಗೆ ಪಾತ್ರ ಯಾವ್ದೇ ಇರಲಿ ಆ ಪಾತ್ರಕ್ಕೆ ನಿರೀಕ್ಷೆಗೂ ಮೀರಿದ ನ್ಯಾಯ ಒದಗಿಸಬಲ್ಲರು ಅಭಿನಯ ಚಕ್ರವರ್ತಿ ‘ಮಿ. ತೀರ್ಥ’. ಖದರ್​ನಲ್ಲಿ ‘ವೀರ ಮದಕರಿ’, ಛಲದಲ್ಲಿ ‘ಕೆಂಪೇಗೌಡ’, ಹಳ್ಳಿಯಿಂದ ದಿಲ್ಲಿವರೆಗೂ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ‘ವಿಷ್ಣುವರ್ಧನ’ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು ಜೆ.ಪಿ.ಪುಟ್ಟೇನಹಳ್ಳಿಯ ಅವರ ನಿವಾಸದ ಎದುರು ಅಭಿಮಾನಿಗಳ ದಂಡೇ ಸೇರಿದ್ದು, ಕಿಚ್ಚ ರಾತ್ರಿ 12ಗಂಟೆಗೇ ಪ್ರೀತಿಯ ಫ್ಯಾನ್ಸ್​ಗೆ ದರ್ಶನ ಕೊಟ್ಟಿದ್ದಾರೆ.

‘ಹುಬ್ಬಳ್ಳಿ’ ಹೈದನಾಗಿ ಗರ್ಜಿಸಿದ ಈ ‘ಹೆಬ್ಬುಲಿ’ ಅಂದ್ರೆ ‘ತಿರುಪತಿ’ ತಿಮ್ಮಪ್ಪನಿಗೂ, ‘ಕಾಶಿ’ ವಿಶ್ವನಾಥನಿಗೂ ಇಷ್ಟ. ‘ಗೂಳಿ’ಯಂತೆ ಮುನ್ನುಗ್ಗಿ ಬಹು ಎತ್ತರಕ್ಕೆ ಬೆಳೆದಿರುವ ‘ಕೋಟಿಗೊಬ್ಬ’. ‘ರಂಗ SSLC’ಯಾಗಿ ‘ಕಾಮಣ್ಣನ ಮಕ್ಕಳು’ ಸಿನಿಮಾದ ರಾಮುವಾಗಿ ನಗೆ ಕಡಲಲ್ಲಿ ತೇಲಿಸಿರುವ ‘ಮುರಾರಿ’ ಸ್ಯಾಂಡಲ್​ವುಡ್​ ‘ವೀರ ಪರಂಪರೆ’ಯ ‘ಪೈಲ್ವಾನ’ಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.
-ಶಶಿಧರ್ ಎಸ್​ ದೋಣಿಹಕ್ಲು

Exit mobile version