ಬೆಳಗಾವಿ: ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಜನಜೀವನ ಅಸ್ತವ್ಯಸ್ತಗೊಂಡು ಅಪಾರ ನಷ್ಟವೂ ಸಂಭವಿಸಿದೆ. ಇನ್ನು ವರುಣನ ಆರ್ಭಟಕ್ಕೆ ಕೇವಲ ಜನ್ರು ಮಾತ್ರ ಸಂಕಷ್ಟ ಅನುಭವಿಸುತ್ತಿರೋದಲ್ಲ. ಕುಂಭದ್ರೋಣ ಮಳೆ ದೇವರಿಗೂ ಸಂಕಷ್ಟ ತಂದೊಡ್ಡಿದೆ.
ಹೌದು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರತಾಪ ಮುಂದುವರಿದಿದ್ದು, ರಣಭೀಕರ ಜಲ ಪ್ರಳಯದಿಂದಾಗಿ ದೇವರಿಗೂ ಕಂಟಕವಾಗಿದೆ. ಹರಿಯುತ್ತಿರೋ ನೀರಿನಲ್ಲಿ ದೇವಿಯ ವಿಗ್ರಹವೊಂದು ಕೊಚ್ಚಿ ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ನಾಲೆಯ ಪ್ರವಾಹಕ್ಕೆ ಸಿಲುಕಿದ ಬಂಡೆಮ್ಮ ದೇವಿ ವಿಗ್ರಹವೂ ಗುಜನಾಳ ಗ್ರಾಮದಿಂದ ಅಂಕಲಗಿ ಗ್ರಾಮಕ್ಕೆ ತೇಲಿಬಂದಿದೆ. ಅಂಕಲಗಿ ಗ್ರಾಮದಲ್ಲಿ ಬಂಡೆಮ್ಮ ದೇವಿಯ ವಿಗ್ರಹವನ್ನು ನೋಡಿದ ಜನ್ರು, ಪೂಜೆ ಸಲ್ಲಿಸಿ ಬಳಿಕ ವಿಗ್ರಹವನ್ನು ಗುಜನಾಳ ಗ್ರಾಮಸ್ಥರಿಗೆ ವಾಪಸ್ ಮಾಡಿದ್ರು.
