ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿಯವರು ಅಧಿಕಾರ ಗದ್ದುಗೆಯಿಂದ ಇಳಿಯುವ ಮುನ್ನ ನಾಡಿನ ಜನತೆಗೆ ಬಹು ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ಸಾಲದಿಂದ ಬಡವರನ್ನು ಮುಕ್ತ ಮಾಡಲು ಕುಮಾರಸ್ವಾಮಿ ಋಣಮುಕ್ತ ಕಾಯ್ದೆ ಜಾರಿಗೆ ತಂದಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರನ್ನು ಸಾಲದಿಂದ ಮುಕ್ತ ಮಾಡಲು ಋಣಮುಕ್ತ ಕಾಯ್ದೆ ಜಾರಿಗೆ ತಂದಿದ್ದೇವೆ. ಖಾಸಗಿಯಾಗಿ ಪಡೆದಿರುವ ಸಾಲ ಮನ್ನಾ ಮಾಡೋ ಮಹತ್ವದ ಯೋಜನೆ ಇದಾಗಿದೆ. ಈ ಕಾಯ್ದೆಗೆ ಜುಲೈ 16ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಅಂತ ಹೇಳಿದರು.
ವಾರ್ಷಿಕ 1.20 ಲಕ್ಷ ರೂಗಳಿಗಿಂತ ಕಡಿಮೆ ಆದಾಯ ಹೊಂದಿರುವವರು, 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ಕೈ ಸಾಲ, ಬಂಗಾರ ಸಾಲ, ಲೇವಾದೇವಿ ಸಾಲ ಈ ಯೋಜನೆಯಡಿ ಮನ್ನಾ ಆಗಲಿದೆ. ಮುಂಬರುವ 90 ದಿನಗಳೊಳಗೆ ಸರಿಯಾದ ದಾಖಲೆಗಳನ್ನು ನೀಡಿದ್ರೆ ಸಾಲ ಮನ್ನಾವಾಗಲಿದೆ ಅಂತಾ ಹೆಚ್ಡಿಕೆ ತಿಳಿಸಿದ್ದಾರೆ.