ಬೆಂಗಳೂರು : ‘ಮೈತ್ರಿ’ಸರ್ಕಾರವನ್ನು ಹೇಗಾದ್ರು ಮಾಡಿ ಉಳಿಸಿಕೊಳ್ಳಲೇ ಬೇಕು ಅಂತ ಪಣ ತೊಟ್ಟಿರುವ ಟ್ರಬಲ್ ಶೂಟರ್ ಖ್ಯಾತಿಯ ಸಚಿವ ಡಿ.ಕೆ ಶಿವಕುಮಾರ್ ಇಂದು ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದಿದ್ದಾರೆ.
ಇಂದು ಬೆಳಗ್ಗೆ 5ಗಂಟೆ ಸುಮಾರಿಗೆ ಅತೃಪ್ತ ಪಾಳಯದಲ್ಲಿ ಗುರುತಿಸಿಕೊಂಡಿರುವ ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿರುವ ಎಂಟಿಬಿ ಮನೆಗೆ ತೆರಳಿರುವ ಡಿಕೆಶಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಇನ್ನು ಅತೃಪ್ತರ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳವಾರದವರೆಗೆ ಯಥಾಸ್ಥತಿಯನ್ನು ಕಾಪಾಡಿಕೊಳ್ಳುವಂತೆ, ಅಂದ್ರೆ, ರಾಜೀನಾಮೆ ಅಂಗೀಕರಿಸ ಬಾರದು, ಅನರ್ಹಗೊಳಿಸಲೂ ಬಾರದು ಅಂತ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿತ್ತು. ಅದರ ಬೆನ್ನಲ್ಲೇ ಅಧಿವೇಶದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ನಿರ್ಧರಿಸಿದ್ದರು.
ಹೀಗಾಗಿ ಅತೃಪ್ತರ ಮನವೊಲಿಕೆಗೆ ನಾಯಕರು ಶತಾಯಗತಾಯ ಪ್ರಯತ್ನ ಪಡ್ತಿದ್ದಾರೆ. ಇಂದೂ ಸೇರಿದಂತೆ ಮೂರು ದಿನ ಬಾಕಿ ಇದ್ದು ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ನಿದ್ದೆಗೆಟ್ಟು ಶ್ರಮಿಸ್ತಿದ್ದಾರೆ.