ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಲು ಕ್ಷಣ ಗಣನೆ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾಗಾಂಧಿ, ಕರ್ನಾಟಕದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ಸಿಂಗ್, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ದೇಶದ ಗಣ್ಯರನ್ನು ಮಾತ್ರವಲ್ಲದೆ ವಿದೇಶಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ. ಪ್ರಮುಖವಾಗಿ ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್, ಮಾರಿಷಸ್ ಪ್ರಧಾನಿ ಪ್ರವಿಂದ ಜುಗ್ನೌತ್, ಭೂತಾನ್ ಪ್ರಧಾನಿ ಡಾ.ಲೋಟಾಯ್ ಶೇರಿಂಗ್, ಮ್ಯಾನ್ಮಾರ್ ಅಧ್ಯಕ್ಷ ಯು.ವಿನ್ ಮೈಂಟ್, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಕಿರ್ಗಿಸ್ತಾನ ಅಧ್ಯಕ್ಷ ಸೂರನ್ಬೇ ಜಿನ್ಬೇಕೋವ್, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ, ಥಾಯ್ಲೆಂಡ್ ವಿಶೇಷ ಪ್ರತಿನಿಧಿ ಗ್ರೀಸಡ ಭೂರ್ನ್ಯಾಕ್ ಅವರನ್ನು ಆಹ್ವಾನಿಸಲಾಗಿದೆ.
ಇನ್ನು ಪ್ರಧಾನಿ ಮೋದಿ ಅವರ ಜೊತೆಗೆ ಇಂದೇ ಪೂರ್ಣ ಪ್ರಮಾಣದ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಒಂದೇ ಹಂತದಲ್ಲಿ ಸಂಪುಟಕ್ಕೆ ಎಲ್ಲಾ ಸಚಿವರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಕನಿಷ್ಠ 42 -52 ಸಚಿವರು ಇಂದೇ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಇನ್ನು ಯಾರಿಗೆ ಸಚಿವ ಸ್ಥಾನ ಒಲಿಯುತ್ತೆ ಅನ್ನೋ ಕುತೂಹಲವೂ ಸಹಜ. 25 ಸಂಸದರ ಬಲವಿರುವ ಕರ್ನಾಟಕದಲ್ಲೂ ಸಾಕಷ್ಟು ನಿರೀಕ್ಷೆಗಳಿವೆ. ರಾಜ್ಯದ ಯಾವೆಲ್ಲಾ ಸಂಸದರಿಗೆ ಮಂತ್ರಿ ಸ್ಥಾನ ಸಿಗುತ್ತೆ ಅನ್ನೋದು ಕುತೂಹಲ.
ಪ್ರಮುಖ ಸಮುದಾಯಗಳ ಕೋಟಾದಲ್ಲಿ ಸಚಿವ ಸ್ಥಾನ ಪಡೆಯಲು ಸಂಸದರು ಕಸರತ್ತು ನಡೆಸುತ್ತಿದ್ದಾರೆ. ಲಿಂಗಾಯತ ಕೋಟಾದಲ್ಲಿ ಗದ್ದಿಗೌಡರ್, ಸುರೇಶ್ ಅಂಗಡಿ, ಶಿವಕುಮಾರ ಉದಾಸಿ, ಭಗವಂತ್ ಖೂಬಾ, ಜಿ.ಎಸ್ ಬಸವರಾಜ್, ಬಿ.ವೈ ರಾಘವೇಂದ್ರ ಹೆಸರುಗಳು, ಒಕ್ಕಲಿಗರ ಕೋಟಾದಲ್ಲಿ ಸದಾನಂದಗೌಡ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಅವರ ಹೆಸರು, ಬ್ರಾಹ್ಮಣ ಸಮುದಾಯದ ಅನಂತ್ಕುಮಾರ್ ಹೆಗಡೆ ಹಾಗೂ ಪ್ರಹ್ಲಾದ್ ಜೋಷಿ ಅವರ ಹೆಸರುಗಳ ಕೇಳಿಬರುತ್ತಿದೆ. ಜೊತೆಗೆ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಕಲಬುರಗಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿರುವ ಉಮೇಶ್ ಜಾಧವ್ ಅವರಿಗೆ ಮಣೆ ಹಾಕಿದರೂ ಅಚ್ಚರಿ ಇಲ್ಲ. ಅಂತೆಯೇ ಒಕ್ಕಲಿಗರ ಓಲೈಕೆಗೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಮಂತ್ರಿ ಸ್ಥಾನದ ಗಿಫ್ಟ್ ಸಿಗೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
