Site icon PowerTV

ಈಕೆ ರಾಜ್ಯದ ಅಬಕಾರಿ ಇಲಾಖೆಯ ಮೊದಲ ಡ್ರೈವರ್

ಡ್ರೈವರ್ ಕೆಲಸ ಅಂದ್ರೆ ಸ್ವಲ್ಪ ಮೂಗು ಮುರಿಯುವರೇ ಹೆಚ್ಚು.ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬರು ಡ್ರೈವರ್ ಆಗೋದು ಅಂದ್ರೆ ಆಶ್ಚರ್ಯವೇ.ಅದ್ರಲ್ಲೂ ಅಬಕಾರಿ ಇಲಾಖೆಯಲ್ಲಿ ಜೀಪ್ ಡ್ರೈವರ್ ಆಗಿದ್ದಾರೆ ಅಂದ್ರೆ ವಿಶೇಷವೇ ಅಲ್ವಾ…ಅಬಕಾರಿ ಇಲಾಖೆಗೆ ಮೊದಲ ಮಹಿಳಾ ಡ್ರೈವರ್ ಆಗಿ ಶೀಲಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರುಷ ಪ್ರಧಾನವಾದ ಡ್ರೈವರ್ ಕೆಲಸವನ್ನ ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಶೀಲಾ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಸ್ಟೇರಿಂಗ್ ಹಿಡಿದು ಕರಾರುವಕ್ಕಾಗಿ ಜೀಪ್ ಓಡಿಸುತ್ತಿರುವ ಈಕೆ ಹೆಸ್ರು ಶೀಲಾ. ಮೂಲತಃ ನಂಜನಗೂಡಿನ ತಾಂಡವಪುರದ ನಿವಾಸಿ. 5 ವರ್ಷಗಳ ಹಿಂದೆ ಅಬಕಾರಿ ಇಲಾಖೆಯ ಡ್ರೈವರ್ ಆಗಿ ನೇಮಕವಾಗಿ ಹುಬ್ಬೇರಿಸುವಂತೆ ಮಾಡಿದ್ರು. ಅಬಕಾರಿ ಇಲಾಖೆಯಲ್ಲಿ ಚಾಲಕಿ ಅಂದ್ರೆ  ದೊಡ್ಡ ಸವಾಲು ಅಂತಾನೇ ಹೇಳಬೇಕು. ಹೊತ್ತು ಗೊತ್ತು ಇಲ್ಲದ ವೇಳೆಯಲ್ಲಿ ದಾಳಿ ನಡೆಸಬೇಕಾಗುತ್ತೆ. ಮಹಿಳೆಯರನ್ನ ರಾತ್ರಿ ವೇಳೆ ಕರ್ತವ್ಯದಲ್ಲಿ ನಿಯೋಜಿಸಬಾರದು ಎಂಬ ನಿಯಮಗಳು ಇವೆ. ಹೀಗಿದ್ದರೂ ಜೀಪ್ ಚಾಲಕಿಯಾಗಿ ಸಮಯದ ಅರಿವಿಲ್ಲದೆ ತಮ್ಮ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ ಶೀಲಾ..!

ಸಧ್ಯ ನಂಜನಗೂಡಿನ ಅಬಕಾರಿ ಇಲಾಖೆಯ ವಾಹನ ಚಾಲಕಿಯಾಗಿರುವ ಶೀಲಾಗೆ ತಮ್ಮ ಕೆಲಸ ಬೇಸರ ತರಿಸಿಲ್ಲ. ತಂದೆ ನಡೆಸುತ್ತಿದ್ದ ಕ್ಯಾಂಟೀನ್ ನಲ್ಲಿ ಸಹಾಯ ಮಾಡುತ್ತಾ ಭಾರಿ ವಾಹನಗಳನ್ನ ಓಡಿಸುವುದನ್ನ ಕಲಿತರು. ಹವ್ಯಾಸಕ್ಕಾಗಿ ಕಲಿತ ಡ್ರೈವಿಂಗ್ ಇದೀಗ ಜೀವನಕ್ಕೇ ದಾರಿ ಆಯಿತು ಶೀಲಾಗೆ. ಅವರೀಗ ಅಬಕಾರಿ ಇಲಾಖೆಯಲ್ಲಿ ರಾಜ್ಯದ ಮೊದಲ ಡ್ರೈವರ್

 ಅಬಕಾರಿ ಇಲಾಖೆ ಅಂದ್ರೆ ರಾತ್ರಿ ಕಾರ್ಯಾಚರಣೆಯೇ ಹೆಚ್ಚು. ಇದನ್ನೆಲ್ಲಾ ಲೆಕ್ಕಿಸದ ಶೀಲಾ ಮಧ್ಯರಾತ್ರಿ ಆದ್ರೂ ಸರಿ ಕರೆ ಬಂದ್ರೆ ಥಟ್ ಅಂತ ಹಾಜರಾಗ್ತಾರೆ. ಶೀಲಾ ರವರ ಪಂಕ್ಚುಯಾಲಿಟಿ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಮೆಚ್ಚುಗೆ ಇದೆ.ಶೀಲಾ ರವರ ಕರ್ತವ್ಯ ಪಾಲನೆಗೆ ಪತಿ ಪ್ರಶಾಂತ್ ಪ್ರೋತ್ಸಾಹವೂ ಇದೆ. 2014 ರಲ್ಲಿ ಹಿರಿಯ ಚಾಲಕಿಯಾಗಿ ನೇಮಕವಾದ ಶೀಲಾರವರ ಕಾರ್ಯವೈಖರಿ ಹಿರಿಯ ಅಧಿಕಾರಿಗಳ ಮನಸ್ಸೂ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಾಹನ ಚಾಲಕಿಯಾಗಿ ನಿರ್ವಹಿಸುತ್ತಿರುವ ಕೆಲಸ ಶೀಲಾರಿಗೆ ತೃಪ್ತಿ ತಂದಿದೆ.ಕೇವಲ ಇಲಾಖೆ ಸಿಬ್ಬಂದಿಗಳು ಮಾತ್ರವಲ್ಲದೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಪ್ರೋತ್ಸಾಹವೂ ಈಕೆಗೆ ಸಿಕ್ಕಿದೆ. ಡ್ರೈವಿಂಗ್ ನಲ್ಲಿ ವೇಗ ಹಾಗೂ ಪರಿಪಕ್ವತೆಯನ್ನ ಹೊಂದಿರುವ ಶೀಲಾ ಪುರುಷರಿಗೆ ಸರಸಾಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಶೀಲಾರ ಮನೋಧೈರ್ಯ ಇತರ ಹೆಣ್ಣುಮಕ್ಕಳಿಗೂ ದಾರಿದೀಪವಾಗಲಿ…
– ಟಿ.ಎನ್.ಕೃಷ್ಣಕುಮಾರ್, ಮೈಸೂರು 

Exit mobile version