Site icon PowerTV

ಸಕ್ಕರೆನಾಡಲ್ಲಿ ಪುತ್ರನ ಪರ ಸಿಎಂ ಕುಮಾರಸ್ವಾಮಿ ಪ್ರಚಾರ

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪುತ್ರ ನಿಖಿಲ್​ ಕುಮಾರಸ್ವಾಮಿ ಪರವಾಗಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಸ್ಟಾರ್​ ಕ್ಯಾಂಪೇನ್​ನಿಂದ ಈಗಾಗಲೇ ರಂಗೇರಿರುವ ಮಂಡ್ಯ ಲೋಕ ಅಖಾಡ ಈಗ ಮತ್ತಷ್ಟು ರಂಗೇರಲಿದೆ. ಪುತ್ರನ ಪರ ಸ್ವತಃ ಪ್ರಚಾರಕ್ಕೆ ಧುಮುಕಿದ ಸಿಎಂ ಕುಮಾರಸ್ವಾಮಿ ಇಂದು ಮತ್ತು ನಾಳೆ ಮಂಡ್ಯದಲ್ಲೇ ಠಿಕಾಣಿ ಹೂಡಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಪುತ್ರ ನಿಖಲ್​ ಪರವಾಗಿ ಮತಬೇಟೆಗೆ ಮುಂದಾದ ಮುಖ್ಯಮಂತ್ರಿ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

ಮಂಡ್ಯದಲ್ಲಿ ಪ್ರಚಾರಕ್ಕೆ ಮುನ್ನ ದೇಗುಲದಲ್ಲಿ ಸಿಎಂ ಪೂಜೆ ಸಲ್ಲಿಸಲಿದ್ದು, ಸಿಎಂ ಬರುವಿಕೆಗೆ ಜೆಡಿಎಸ್​ ಕಾರ್ಯಕರ್ತರು ಕಾಯುತ್ತಿದ್ದಾರೆ. ಕೆಆರ್​ಎಸ್​​ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸಿಎಂ ಪೂಜೆ ಮಾಡಲಿದ್ದು, ಪೂಜೆ ಬಳಿಕ ಕಾರ್ಯಕರ್ತರ ಜೊತೆ ರೋಡ್​ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ. ಹಸು ಮತ್ತು ಕರುವಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಲಿದ್ದಾರೆ. ಮುಖ್ಯಮಂತ್ರಿಗಾಗಿ ಅಭಿಮಾನಿಗಳು 220 ಕೆಜಿ ಒಣದ್ರಾಕ್ಷಿ ಹಾರ ಸಿದ್ಧಪಡಿಸಿದ್ದು, ಗುಲಾಬಿ ಹೂ ಮಿಶ್ರಿತ 300 ಕೆಜಿಗೂ ಹೆಚ್ಚು ಭಾರದ ಹಾರವೂ ಸಿದ್ಧವಾಗಿದೆ.

ತಡರಾತ್ರಿ 1 ಗಂಟೆಗೆ ಮಂಡ್ಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆ.ಆರ್.ಎಸ್.ನ ಖಾಸಗಿ ಹೋಟೆಲ್ ಸಿಎಂ ವಾಸ್ತವ್ಯ ಹೂಡಿದ್ದಾರೆ. ಇವತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಲಿರುವ ಸಿಎಂ ಕೆ.ಆರ್.ಎಸ್., ಬೆಳಗೊಳ, ಪಾಲಹಳ್ಳಿ, ನಗುವನಹಳ್ಳಿ ಸೇರಿ ಹಲವು ಗ್ರಾಮದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಸಿಎಂಗೆ ಸ್ಥಳೀಯ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸಾಥ್ ನೀಡಿದ್ದಾರೆ.

Exit mobile version