Site icon PowerTV

ಕೊನೆಗೂ ಹಠ ಸಾಧಿಸಿದ ರೇವಣ್ಣ : ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆ

ಹಾಸನ : ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
2017ರ ಜುಲೈ 17ರಿಂದ ಹಾಸನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಅವರು ಪ್ರಾಮಾಣಿಕ ಅಧಿಕಾರಿ ಎಂದು ಪ್ರಸಿದ್ದಿಯನ್ನು ಪಡೆದಿದ್ದರು. ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಸಚಿವ ಎ. ಮಂಜು ಅವರ ಒತ್ತಾಯದ ಮೇರೆಗೆ ರೋಹಿಣಿ ಅವರನ್ನು ವರ್ಗಾವಣೆ ಮಾಡಿಸಲಾಗಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ರು. ಆದ್ರೆ ಸಿಎಟಿ ಸರ್ಕಾರದ ವರ್ಗಾವಣೆ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಿಂಧೂರಿ ಅವರು ಹೈಕೋರ್ಟ್ ಮೆಟ್ಟಿಲೇರಿ ವರ್ಗಾವಣೆಗೆ ತಡೆ ತಂದು ಹಾಸನದಲ್ಲೇ ಮುಂದುವರೆದಿದ್ದರು. ಈ ವೇಳೆ ಹೆಚ್​.ಡಿ ರೇವಣ್ಣ ಸಿಂಧೂರಿ ಅವರ ಪರ ನಿಂತಿದ್ರು.
ಆದರೆ ಮೈತ್ರಿ ಸರ್ಕಾರ ಬಂದಮೇಲೆ ರೋಹಿಣಿ ಸಿಂಧೂರಿ ಮತ್ತು ರೇವಣ್ಣ ಅವರ ನಡುವೆ ಸಾಕಷ್ಟು ಬಾರಿ ಜಟಾಪಟಿ ನಡೆದಿತ್ತು. ಈಗ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಮಾಡಿಸುವಲ್ಲಿ ರೇವಣ್ಣ ಯಶಸ್ವಿಯಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಮೇಲೆ ಪ್ರಭಾವ ಬೀರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸಿದ್ದಾದರೂ ಏಕೆ ಅನ್ನೋದು ಪ್ರಶ್ನೆ.
ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷಾ ಅವರು ನೇಮಕವಾಗಿದ್ದಾರೆ. ವರ್ಗಾವಣೆ ಆದ ಕೆಲವೇ ಗಂಟೆಗಳಲ್ಲಿ ಪಾಷಾ ಅವರು ಅಧಿಕಾರ ಸ್ವೀಕರಿಸಿದ್ದಾರೆ,..!
ಇನ್ನು ರೋಹಿಣಿ ಸಿಂಧೂರಿ ಅವರಲ್ಲದೆ ಐಎಎಸ್​ ಅಧಿಕಾರಿಗಳಾದ ಡಾ.ಎಂವಿ ವೆಂಕಟೇಶ್, ಕೃಷ್ಣ ಬಾಜಪೇಯಿ, ಅಕ್ರಂ ಪಾಷಾ ಅವರೂ ವರ್ಗಾವಣೆಯಾಗಿದ್ದಾರೆ.

Exit mobile version