Site icon PowerTV

ಅಧಿವೇಶನಕ್ಕೆ ಮೈತ್ರಿ ಸಚಿವರು, ಶಾಸಕರ ನಿರಾಸಕ್ತಿ..!

ಬೆಳಗಾವಿ : ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗ್ತಿದೆ. ಒಂದು ಕಡೆ ಮೈತ್ರಿ ಸರ್ಕಾರ ತಮ್ಮಲ್ಲಿನ ಸಮನ್ವಯತೆ ಮತ್ತು ಉತ್ತರ ಕರ್ನಾಟಕಕ್ಕೆ ತಾವು ಕೊಡುತ್ತಿರುವ ಆದ್ಯತೆಯನ್ನು ಪ್ರತಿಬಿಂಬಿಸಲು ಸಜ್ಜಾಗಿದೆ. ಇನ್ನೊಂದೆಡೆ ಪ್ರತಿಪಕ್ಷ ಬಿಜೆಪಿ ರೈತರ ಸಮಸ್ಯೆಗಳು ಹಾಗೂ ಇತ್ತೀಚಿನ ಘಟನೆಗಳನ್ನು ಮುಂದಿಟ್ಟು ಸರ್ಕಾರದ ಚಳಿ ಬಿಡಿಸಲು ಮುಂದಾಗಿದೆ. ಈ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿರುವುದು ಮೈತ್ರಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ಇದರ ನಡುವೆ ಅಧಿವೇಶನಕ್ಕೆ ಮೈತ್ರಿ ಪಾಳಯದ ಸಚಿವರು, ಶಾಸಕರೇ ನಿರಾಸಕ್ತಿ ತೋರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿವೇಶನದ ತಯಾರಿ ಪರಿಶೀಲನೆಗೆ ಬಂದಿಲ್ಲ..! ಸಚಿವ ಡಿ.ಕೆ ಶಿವಕುಮಾರ ಮೇಲೆ ಜಾರಕಿಹೊಳಿ ಸಹೋದರರು ಮುನಿಸಿಕೊಂಡಿದ್ದರು. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನಕ್ಕೆ ಗೈರಾಗಿರೋದ್ರಿಂದ ಅವರ ಆಪ್ತ ಶಾಸಕರೂ ಗೈರಾಗುವ ಸಾಧ್ಯತೆ ಇದೆ.

ಹೀಗಿದೆ ಬಂದೋಬಸ್ತ್ : ಅಧಿವೇಶನಕ್ಕೆ ಸುವರ್ಣಸೌಧದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರು, 7 ಎಸ್ಪಿಗಳು, 11 ಎಎಸ್ಪಿಗಳು, 34 ಡಿಎಸ್ಪಿಗಳು, 81 ಸಿಪಿಐ, 227 ಪಿಎಸ್ಐ ನಿಯೋಜನೆ, 23 ಡಬ್ಲ್ಯುಪಿಎಸ್‌ಐ, 251 ಎಎಸ್‌ಐಗಳು, 4071 ಹೆಡ್‌ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ಗಳು ಸೇರಿ 4,874 ಮಂದಿಯನ್ನು, ಜೊತೆಗೆ 400 ಗೃಹರಕ್ಷಕ ದಳದವರು, 30 ಕೆಎಸ್‌ಆರ್‌ಪಿ ದಳ , 15 ಜಿಲ್ಲಾ ಸಶಸ್ತ್ರ ದಳ, 5 ಕ್ಷಿಪ್ರ ಸ್ಪಂದನಾ ತಂಡಗಳು, ವಿದ್ವಂಸಕ ಕೃತ್ಯ ತಪಾಸಣಾ ತಂಡಗಳು– 15, ಬಾಂಬ್‌ ನಿಷ್ಕ್ರಿಯ ದಳ, ಗರುಡ ದಳ, 15 ವೈರ್‌ಲೆಸ್ ತಂಡಗಳನ್ನು ನಿಯೋಜಿಸಲಾಗಿದೆ.

Exit mobile version