ಧೋನಿ ಮೊದಲ ಹೆಜ್ಜೆ ಇಟ್ಟು ಇಂದಿಗೆ 12 ವರ್ಷ..!

0
314

ಮಹೇಂದ್ರ ಸಿಂಗ್ ಧೋನಿ… ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕ..! ವಿಶ್ವ ಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಧೋನಿ ವಿಶ್ವ ಸಾಮ್ರಾಟನಾಗಿ ಮೆರೆದಿದ್ದು ಕೂಡ ಈಗ ಇತಿಹಾಸ..! ಭಾರತೀಯ ಕ್ರಿಕೆಟಿಗೆ ಹೊಸ ಭಾಷ್ಯ ಬರೆದ ಮಾಹಿ ಆ ಇತಿಹಾಸ ಸೃಷ್ಟಿಸಲು ಇಟ್ಟ ಮೊದಲ ಹೆಜ್ಜೆಗಿಂದು 12 ವರ್ಷ..!
ಹೌದು, 2007ರ ಒಡಿಐ ವಿಶ್ವಕಪ್​ನಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ಮುಗ್ಗರಿಸಿತ್ತು. ಬಳಿಕ ನಡೆದ ಟಿ20 ವರ್ಲ್ಡ್​ಕಪ್​​​ನಿಂದ ದ್ರಾವಿಡ್ ಹೊರಗುಳಿದಿದ್ರು. ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್, ಸೌರವ್​ ಗಂಗೂಲಿ ಕೂಡ ತಂಡದಲ್ಲಿರಲಿಲ್ಲ. ಮಹೇಂದ್ರ ಸಿಂಗ್ ಧೋನಿ ಯುವ ಕ್ರಿಕೆಟಿಗನ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಆಡಲು ಸೌತ್ ಆಫ್ರಿಕಾಕ್ಕೆ ಹೋಯ್ತು.
ಧೋನಿ ನಾಯಕತ್ವದ ತಂಡ ಯುವಕರು ಮತ್ತು ಅನುಭವಿಗಳಿಂದ ಕೂಡಿತ್ತು. ಯುವರಾಜ್ ಸಿಂಗ್ ಉಪ ನಾಯಕನಾಗಿದ್ರು. ಗೌತಮ್ ಗಂಬೀರ್, ವೀರೇಂದ್ರ ಸೇಹ್ವಾಗ್​, ರೋಹಿತ್ ಶರ್ಮಾ, ಕನ್ನಡಿಗ ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್, ಅಜಿತ್ ಅಗರ್​ಕರ್, ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ, ಇರ್ಫಾನ್ ಪಠಾಣ್, ಯೂಸಫ್ ಪಠಾಣ್, ಪಿಯೂಷ್ ಚಾವ್ಲಾ, ಆರ್​.ಪಿ ಸಿಂಗ್, ಎಸ್​.ಶ್ರೀಶಾಂತ್ ಅವರನ್ನೊಳಗೊಂಡ ಪ್ರಬಲ ತಂಡವೇ ದಕ್ಷಿಣ ಆಫ್ರಿಕಾಕ್ಕೆ ತೆರಳಿತ್ತು. ಆದರೆ, ಒಡಿಐ ವಿಶ್ವಕಪ್​ನಲ್ಲೇ ಮುಗ್ಗರಿಸಿದ್ದ ಭಾರತ ಹೊಸದಾಗಿ ಆರಂಭವಾದ ಟಿ20 ಫಾರ್ಮೆಟ್​ಗೆ, ಅದೂ ದಕ್ಷಿಣ ಆಫ್ರಿಕಾ ಪಿಚ್​ಗಳಲ್ಲಿ ಹೊಂದಿಕೊಳ್ಳುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಭಾರತ ವಿಶ್ವಕಪ್ ಗೆಲ್ಲುತ್ತೆ ಅಂತ ಯಾರೂ ಕೂಡ ನಿರೀಕ್ಷೆ ಮಾಡಿರ್ಲಿಲ್ಲ. ಆದರೆ, ಧೋನಿ & ಟೀಮ್ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಠಿ ಮಾಡಿತ್ತು. ಆ ಇತಿಹಾಸ ಸೃಷ್ಠಿಸಲು ನಾಯಕನಾಗಿ ಧೋನಿ ಇಟ್ಟ ಮೊದಲ ಹೆಜ್ಜೆಗಿಂದ 12 ವರ್ಷ..!
2007ರ ಸೆಪ್ಟೆಂಬರ್ 14ರಂದು ಭಾರತ ಆ ಟೂರ್ನಿಯಲ್ಲಿ ಮೊದಲ ಮ್ಯಾಚ್ ಆಡಿತ್ತು. ಧೋನಿ ನಾಯಕತ್ವದ ಮೊದಲ ಪಂದ್ಯ ಕೂಡ ಅದಾಗಿತ್ತು. ಡರ್ಬನ್​ನ ಕಿಂಗ್ಸ್​ಮೇಡ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಭಾರತಕ್ಕೆ ಮೊದಲು ಬ್ಯಾಟಿಂಗ್​ ಮಾಡುವಂತೆ ಆಹ್ವಾನಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕನ್ನಡಿಗ ರಾಬಿನ್ ಉತ್ತಪ್ಪ (50) ಮತ್ತು ಮೊದಲ ಬಾರಿ ತಂಡವನ್ನು ಮುನ್ನಡೆಸಿದ್ದ ನಾಯಕ ಧೋನಿ (33) ಆಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳ್ಕೊಂಡು 141ರನ್ ಮಾಡಿತ್ತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ್ ಕೂಡ 20 ಓವರ್​ಗಳಲ್ಲಿ 141 ರನ್ ಮಾಡಿದ್ದರಿಂದ ಮ್ಯಾಚ್​ ಟೈ ಆಯ್ತು. ಬಳಿಕ ಬಾಲ್​ ಔಟ್​ನಲ್ಲಿ ಭಾರತ ಗೆದ್ದುಬೀಗಿತು. ಧೋನಿ ನಾಯಕತ್ವದ ಚೊಚ್ಚಲ ಪಂದ್ಯದ ಗೆಲುವು ಅದಾಗಿತ್ತು. ಅಷ್ಟೇ ಅಲ್ಲದೆ ಭಾರತ ಟಿ20 ವಿಶ್ವಕಪ್ ಗೆಲ್ಲಲು ಇಟ್ಟ ಮೊದಲ ಗೆಲುವಿನ ಹೆಜ್ಜೆಯೂ ಅದೇ..! ನಂತರ ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ ಧೋನಿ ಟೀಮ್ ಸೆಪ್ಟೆಂಬರ್ 24ರಂದು ಜೊಹಾನ್ಸ್​ ಬರ್ಗ್​​ನದಲ್ಲಿ ನಡೆದ ಫೈನಲ್​ನಲ್ಲಿಯೂ ಅದೇ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಚೊಚ್ಚಲ ಟಿ20 ವರ್ಲ್ಡ್​​ಕಪ್​ಗೆ ಮುತ್ತಿಕ್ಕಿತು. ಅಲ್ಲಿಂದ ಶುರುವಾಗಿದ್ದು ವಿಶ್ವಕ್ರಿಕೆಟ್​ನಲ್ಲಿ ಯುವ ನಾಯಕ ಧೋನಿ ಶಕೆ ಆರಂಭವಾಯ್ತು..!

LEAVE A REPLY

Please enter your comment!
Please enter your name here