ಬೆಂಗಳೂರು: ಕೊರೋನಾ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ಒಂದಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತಮ್ಮಿಂದಾದ ನೆರವನ್ನು ನೀಡುತ್ತಲೇ ಇದ್ದಾರೆ. ಇದೀಗ ಪುಟ್ಟ ಬಾಲಕಿಯೊಬ್ಬಳು ತನ್ನ ಸಂಪಾದನೆಯ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾಳೆ.
12 ವರ್ಷದ ಹುಡುಗಿ ಮಾನ್ವಿ ಪಾಟೇಲ್, ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದಾಕೆ. ಇವಳು ಬೆಂಗಳೂರು ಮೂಲದ ಹೇಮಾ ಪಾಟೀಲ್ ಅವರ ಪುತ್ರಿ. ಇನ್ನೂ 6 ನೇ ತರಗತಿಯಲ್ಲಿ ಓದುತ್ತಿರುವ ಮಾನ್ವಿ ತನ್ನ ಚಿಕ್ಕ ವಯಸ್ಸಿನಲ್ಲೆ ಮಾಡೆಲಿಂಗ್ ಹಾಗೂ ನಟನೆಯ ಮೂಲಕ ಹಣ ಗಳಿಸುತ್ತಿದ್ದಾಳೆ. ತನ್ನ ಸಂಪಾದನೆಯ 50,000 ರೂಪಾಯಿಗಳನ್ನು ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಮಾನ್ವಿ, ‘‘ಈ ಸಾಂಕ್ರಾಮಿಕ ರೋಗದ ವಿರುದ್ಧ ನಾವು ಒಟ್ಟಾಗಿ ಹೋರಾಡೋಣ ಹಾಗೂ ಒಟ್ಟಾಗಿ ಗೆಲ್ಲೋಣ‘‘ ಎಂದು ಹೇಳಿದ್ದಾಳೆ.