ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಶತಕ ಸಿಡಿಸಿ ದಾಖಲೆ ಬರೆದಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನಲ್ಲಿ ಸಾಧಿಸಿರೋದು ಅಪಾರ. ಏಕದಿನ ಕ್ರಿಕೆಟಲ್ಲಿ ಸೆಂಚುರಿ ಬಾರಿಸುವುದೇ ಕಷ್ಟ ಎಂಬ ಸಂದರ್ಭದಲ್ಲಿ ಅಜೇಯ 200ರನ್ ಬಾರಿಸಿದವರು. ತಮ್ಮ ಕ್ರಿಕೆಟ್ ಜೀವನದ ಸಂಧ್ಯಾಕಾಲದಲ್ಲಿ ಒಡಿಐನಲ್ಲಿ ಡಬಲ್ ಸೆಂಚುರಿ ಬಾರಿಸಿ ಸಚಿನ್ ಯುವ ಕ್ರಿಕೆಟಿಗರಿಗೆ ಮಾದರಿಯಾದರು. ಆ ದಿನಕ್ಕೆ ಇಂದಿಗೆ ಸರಿಯಾಗಿ ದಶಕದ ಸಂಭ್ರಮ!
ಹೌದು, 10 ವರ್ಷದ ಹಿಂದಿನ ಈ ದಿನ , ಅಂದ್ರೆ 2010 ರ ಫೆಬ್ರವರಿ 24ರಂದು ಗ್ವಾಲಿಯರ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಸಚಿನ್ ಡಬಲ್ ಸೆಂಚುರಿ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದರು. ಸಚಿನ್ ಸಿಡಿಸಿದ ಆ ದ್ವಿಶತಕ ವಿಶ್ವಕ್ರಿಕೆಟ್ನಲ್ಲಿ ಒಡಿಐ ಫಾರ್ಮೆಟ್ನಲ್ಲಿ ಮೂಡಿಬಂದ ಚೊಚ್ಚಲ ದ್ವಿಶತಕ.
ಸಚಿನ್ ಆ ದಾಖಲೆ ಬರೆಯುವ ವೇಳೆ ಏಕದಿನ ಕ್ರಿಕೆಟ್ ಆರಂಭವಾಗಿ 39 ವರ್ಷಗಳಾಗಿತ್ತು. 2,961 ಪಂದ್ಯಗಳು ನಡೆದಿದ್ದವು. ಆದರೆ ಅಷ್ಟೊಂದು ವರ್ಷ, ಅಷ್ಟೊಂದು ಪಂದ್ಯಗಳಲ್ಲಿ ಯಾರೊಬ್ಬರೂ ದ್ವಿಶತಕ ಸಿಡಿಸಲು ಆಗಿರಲಿಲ್ಲ. ಕೆಲವರು ಸನಿಹ ಹೋಗಿ ಬಂದಿದ್ದರಷ್ಟೇ.ಸಚಿನ್ ಆ ಪಂದ್ಯದಲ್ಲಿ 147 ಬಾಲ್ಗಳಲ್ಲಿ 25 ಬೌಂಡರಿ, 3 ಸಿಕ್ಸರ್ ಸಹಿತ 200ರನ್ ಬಾರಿಸಿದ್ರು.
ಆ ಬಳಿಕ ಭಾರತದವರೇ ಆದ ಡ್ಯಾಶಿಂಗ್ ಓಪನವರ್ ಖ್ಯಾತಿಯ ವಿರೇಂದ್ರ ಸೆಹ್ವಾಗ್ 2011ರಲ್ಲಿ ಇಂದೋರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 219ರನ್ ಬಾರಿಸಿದ್ರು. ಅದು ವಿಶ್ವಕ್ರಿಕೆಟ್ ಹಾಗೂ ಭಾರತದ ಪರ ಮೂಡಿ ಬಂದ ಎರಡನೇ ಏಕದಿನ ಡಬಲ್ ಸೆಂಚುರಿ. ನಂತರ 2013ರಲ್ಲಿ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬೆಂಗಳೂರಲ್ಲಿ ಆಸ್ಟ್ರೇಲಿಯಾ ವಿರುದ್ಧ 209ರನ್ ಮಾಡಿದ್ರು. ಪುನಃ 2013ರಲ್ಲಿ ಶ್ರೀಲಂಕಾ ವಿರುದ್ಧ ಕೊಲ್ಕತ್ತಾದಲ್ಲಿ ಶರ್ಮಾ 264ರನ್ ಸಿಡಿಸಿದ್ರು. ಅದಾದ ಬಳಿಕ 2015ರಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ಗೇಲ್ ಜಿಂಬಾಬ್ವೆ ವಿರುದ್ಧ (215), ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ ವಿಂಡೀಸ್ ವಿರುದ್ಧ (ಅಜೇಯ 237), 2017ರಲ್ಲಿ ಮೊಹಾಲಿಯಲ್ಲಿ ಲಂಕಾ ವಿರುದ್ಧ ಪುನಃ ರೋಹಿತ್ ಶರ್ಮಾ (ಅಜೇಯ 208), 2018ರಲ್ಲಿ ಪಾಕಿಸ್ತಾನದ ಫಕರ್ ಜಮಾನ್ ಜಿಂಬಾಬ್ವೆ ವಿರುದ್ಧ (ಅಜೇಯ 210) ಡಬಲ್ ಸೆಂಚುರಿ ಬಾರಿಸಿ ಮಿಂಚಿದ್ದಾರೆ.
ಗೇಲ್ ಡಬಲ್ ಸೆಂಚುರಿಗೆ 5 ವರ್ಷ : ಸಚಿನ್ ತೆಂಡೂಲ್ಕರ್ ಡಬಲ್ ಸೆಂಚುರಿ ಬಾರಿಸಿ ಇಂದಿಗೆ 10 ವರ್ಷವಾಗಿದ್ರೆ, ವೆಸ್ಟ್ ಇಂಡೀಸ್ನ ಕ್ರಿಸ್ಗೇಲ್ ಡಬಲ್ ಸೆಂಚುರಿ ಬಾರಿಸಿ ಇಂದಿಗೆ 5 ವರ್ಷ. ಗೇಲ್ 2015 ಫೆ 24ರಂದು ಜಿಂಬಾಬ್ವೆ ವಿರುದ್ಧ ಕ್ಯಾನ್ಬೆರ್ರಾದಲ್ಲಿ 215ರನ್ ಗಳಿಸಿದ್ರು.
ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಾಧಕರ ಪಟ್ಟಿ
ಆಟಗಾರ ದೇಶ ಸ್ಕೋರ್ ಸ್ಥಳ ವರ್ಷ ಎದುರಾಳಿ
ತೆಂಡೂಲ್ಕರ್ ಭಾರತ 200* ಗ್ವಾಲಿಯರ್ 2010 ದಕ್ಷಿಣ ಆಫ್ರಿಕಾ
ಸೆಹ್ವಾಗ್ ಭಾರತ 219 ಇಂದೋರ್ 2011 ವಿಂಡೀಸ್
ರೋಹಿತ್ ಶರ್ಮಾ ಭಾರತ 209 ಬೆಂಗಳೂರು 2013 ಆಸ್ಟ್ರೇಲಿಯಾ
ರೋಹಿತ್ ಶರ್ಮಾ ಭಾರತ 264 ಕೋಲ್ಕತ್ತಾ 2014 ಶ್ರೀಲಂಕಾ
ಕ್ರಿಸ್ಗೇಲ್ ವಿಂಡೀಸ್ 215 ಕ್ಯಾನ್ಬೆರಾ 2015 ಜಿಂಬಾಬ್ವೆ
ಗಪ್ಟಿಲ್ ನ್ಯೂಜಿಲೆಂಡ್ 237* ವೆಲ್ಲಿಂಗ್ಟನ್ 2015 ವಿಂಡೀಸ್
ರೋಹಿತ್ ಶರ್ಮಾ ಭಾರತ 208* ಮೊಹಾಲಿ 2017 ಶ್ರೀಲಂಕಾ
ಫಕರ್ ಜಮಾನ್ ಪಾಕಿಸ್ತಾನ್ 210* ಬುಲವಾಯೋ 2018 ಜಿಂಬಾಬ್ವೆ
ರೋಹಿತ್ ಶರ್ಮಾ 3 ಬಾರಿ : ವಿಶ್ವಕ್ರಿಕೆಟ್ನಲ್ಲಿ ಅತೀ ಹೆಚ್ಚು ಏಕದಿನ ದ್ವಿಶತಕ ಬಾರಿಸಿರುವ ದಾಖಲೆ ಟೀಮ್ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೆಸರಲ್ಲಿದೆ. 2013ರಲ್ಲಿ ಬೆಂಗಳೂರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಏಕದಿನ ದ್ವಿಶತಕ (209) ಬಾರಿಸಿದ ರೋಹಿತ್ ಶರ್ಮಾ 2014ರಲ್ಲಿ ಶ್ರೀಲಂಕಾ ವಿರುದ್ಧ ಕೋಲ್ಕತ್ತಾದಲ್ಲಿ ಮತ್ತೊಂದು ಡಬಲ್ ಸೆಂಚುರಿ (264) ಸಿಡಿಸಿದರು. 2017ರಲ್ಲಿ ಮೊಹಾಲಿಯಲ್ಲಿ ಪುನಃ ಲಂಕಾ ವಿರುದ್ಧ ಮತ್ತೊಂದು ದ್ವಿಶತಕ (208*) ಸಿಡಿಸಿದ್ರು. ಹೀಗೆ ವಿಶ್ವಕ್ರಿಕೆಟ್ನಲ್ಲಿ ಏಕದಿನದ ಮಾದರಿಯಲ್ಲಿ ಮೂರು ದ್ವಿಶತಕದ ಸಿಡಿಸಿರುವ ದಾಖಲೆ ಮಾಡಿದ್ದಾರೆ.