ಕೋಲಾರ, ಜೂ.23: ಕೋಲಾರದಲ್ಲಿ ಕೆರೆ ಉಳಿಸಲು ಒಂದು ಕಡೆ ಹೋರಾಟ ನಡೆಯುತ್ತಿದೆ. ಆದ್ರೆ, ಕೆರೆಗಳನ್ನು ನಾಶ ಮಾಡುವ ದುಷ್ಟ ಪ್ರವೃತ್ತಿಯೂ ಮತ್ತೊಂದೆಡೆ ಮುಂದುವರೆಯುತ್ತಿದೆ. ಹಣದಾಸೆಗಾಗಿ ಕೆಲವು ಅಧಿಕಾರಿಗಳು ಕೆರೆಗಳನ್ನು ಹಾಳುಗೆಡಲು ಕಾರಣರಾಗ್ತಿದ್ದಾರೆ ಅನ್ನೋದಕ್ಕೆ ಹಲವು ಸಾಕ್ಷಿಗಳು ಇಲ್ಲಿ ಸಿಗುತ್ತವೆ. ಈ ಪೈಕಿ ಕೋಲಾರ ತಾಲೂಕಿನ ನರಸಾಪುರ ವ್ಯಾಪ್ತಿಯ ತಟ್ಟನಕುಂಟೆ ಕೆರೆಯೂ ಒಂದಾಗಿದೆ.
ಕೋಲಾರ ತಾಲೂಕಿನ ಕುರ್ಕಿ ಗ್ರಾಮದ ಬಳಿ ತಟ್ಟನಕುಂಟೆ ಅನ್ನೋ ಹೆಸರಿನ ಕೆರೆಯಿದೆ. ನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಕೆರೆಯು ಮೊನ್ನೆಯವರೆಗೂ ಇಲ್ಲಿನ ರೈತರ ಭೂಮಿಗೆ ನೀರುಣಿಸುತ್ತಿತ್ತು. ಆದ್ರೆ, ಅದ್ಯಾವಾಗ ನರಸಾಪುರ ಪಂಚಾಯಿತಿಗೆ ಪಿಡಿಓ ಆಗಿ ಮಹೇಶ ಬಂದ್ರೋ ಈ ಕೆರೆಯ ಅವಸಾನವೂ ಶುರುವಾಯ್ತು. ಈ ಕೆರೆಯಲ್ಲಿನ ಬೆಲೆ ಬಾಳುವ ಕ್ಲೇ ಮಣ್ಣಿಗಾಗಿ ಬೆಂಗಳೂರಿನ ಗುತ್ತಿಗೆದಾರ ಬಿ.ಆರ್.ಅರ್ಥ್ ಮೂವರ್ಸ್ನವರಿಗೆ ಪಿಡಿಓ ಮಹೇಶ ಕಳೆದ ತಿಂಗಳು ಮಣ್ಣು ಸಾಗಾಣಿಕೆಯ ಅನುಮತಿಯನ್ನು ಕೊಟ್ಟಿದ್ದಾರೆ. ತಟ್ಟನಕುಂಟೆ ಕೆರೆಯ ಮಣ್ಣನ್ನು ಸಾಗಿಸೋದಿಕ್ಕೆ ಅವಕಾಶ ಕೊಟ್ಟಿದ್ದೇ ತಡ ಕೆರೆಯು ತನ್ನ ನೈಜ ರೂಪವನ್ನು ಕಳೆದುಕೊಂಡಿದೆ.
ಒಂದೂ ಕಾಲು ಮೀಟರ್ನಷ್ಟು ಆಳಕ್ಕೆ ಮಾತ್ರ ಕೆರೆಯ ಮಣ್ಣು ತೆಗೀಬೇಕು ಅನ್ನೋ ನಿಯಮವನ್ನು ಗುತ್ತಿಗೆದಾರ ಉಲ್ಲಂಘಿಸಿದ್ದಾರೆ. ಕೆರೆಯ ಏರಿಗೆ ಹಾನಿಯಾಗದಂತೆ ಮೂವತ್ತು ಅಡಿ ದೂರದಲ್ಲಿ ಮಣ್ಣು ತೆಗೀಬೇಕು ಅನ್ನೋ ನಿಬಂಧನೆಯನ್ನೂ ಗುತ್ತಿಗೆದಾರ ಲೆಕ್ಕಕ್ಕೆ ಇಟ್ಟಿಲ್ಲ. ನಿರ್ದಿಷ್ಟ ಅಳತೆಯಲ್ಲಿ ಮಾತ್ರ ಮಣ್ಣು ತೆಗೀಬೇಕು ಅನ್ನೋ ಗಣಿ ಇಲಾಖೆಯ ನಿಯಮಗಳನ್ನು ಗುತ್ತಿಗೆದಾರ ಗಾಳಿಗೆ ತೂರಿದ್ದಾರೆ. ಹಗಲೂ-ರಾತ್ರಿ ಭಾರೀ ಯಂತ್ರಗಳನ್ನು ಬಳಸಿಕೊಂಡು ಮಣ್ಣನ್ನು ಸಾಗಿಸುವ ಮೂಲಕ ಕೆರೆಗೆ ಹಾನಿ ಮಾಡುತ್ತಿದ್ದಾರೆ.
ಈ ಬಗ್ಗೆ ಇಲ್ಲಿನ ರೈತರು ಕೊಟ್ಟ ದೂರಿಗೆ ಪಿಡಿಓ ಮಹೇಶ ಕವಡೆ ಕಿಮ್ಮತ್ತನ್ನೂ ಕೊಟ್ಟಿಲ್ಲ. ಗುತ್ತಿಗೆದಾರ ಸಂಸ್ಥೆಯ ಜೊತೆಗೆ ಶಾಮೀಲಾಗಿರುವ ಪಿಡಿಓ ಮಹೇಶ ತಟ್ಟನಕುಂಟೆ ಕೆರೆಯು ನಾಶವಾಗ್ತಿದ್ರೂ ಯಾವುದೋ ಆಮೀಷಕ್ಕೆ ಬಲಿಯಾಗಿ ಸುಮ್ಮನಾಗಿದ್ದಾರೆ ಅನ್ನೋದು ಸ್ಥಳೀಯರ ಆರೋಪವಾಗಿದೆ. ಈ ಮಧ್ಯೆ, ತಟ್ಟನಕುಂಟೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯೋದನ್ನು ನಿಲ್ಲಿಸೋದಿಕ್ಕೆ ವೇಮಗಲ್ ಪೊಲೀಸ್ರು ಕೂಡಾ ಹಿಂಜರಿಯುತ್ತಿರೋದು ಅನುಮಾನವನ್ನು ಮೂಡಿಸಿದೆ. ಸಿಇಓ ದರ್ಶನ್ ಅವ್ರಿಗೆ ಈ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿ ಈಗಾಗ್ಲೇ ಒಂದು ವಾರ ಕಳೆದಿದ್ರೂ ಕ್ರಮವಾಗಿಲ್ಲ ಅನ್ನೋ ಅಸಮಾಧಾನವಿದೆ. ಹಿರಿಯ ಅಧಿಕಾರಿಗಳು ಮೌನವಾದ್ರೆ ಕೆರೆಗಳು ಉಳಿಯೋದಾದ್ರೂ ಹೇಗೆ ಅನ್ನೋದು ಇಲ್ಲಿನವ್ರ ಆತಂಕವಾಗಿದೆ.