ಬಾಗಲಕೋಟೆ: ಮಂಗಗಳು ತೋಟಕ್ಕೆ ನುಗ್ಗಿ ಉಪಟಳ ಮಾಡೋದನ್ನು ನೋಡಿರ್ತಾರಾ? ಆದ್ರೆ, ಎಲ್ಲಾದ್ರು ಆರಾಮಾಗಿ ಅತಿಥಿಯಂತೆ ಬಂದು ಹೋಗೋದನ್ನು ನೋಡಿದ್ದೀರಾ? ಇಲ್ಲೊಂದು ಮಂಗ ಮದುವೆ ಮಂಟಪದಲ್ಲಿ ವಾದ್ಯ ಕೇಳಿದ್ರೆ ಸಾಕು ಅಲ್ಲಿಗೆ ಹಾಜಾರಾಗಿ ಬಿಡುತ್ತೆ! ಮದುವೆ ಮಂಟಪಕ್ಕೆ ಬಂದು ಫೋಟೋ ತೆಗೆಸಿಕೊಂಡು ಆತಿಥ್ಯ ಸ್ವೀಕರಿಸಿದ ಘಟನೆಯೊಂದು ಬಾಗಲಕೋಟೆ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಕಳೆದೊಂದು ವಾರದಿಂದ ಮದುವೆಗಳಿಗೆ ಹಾಜರಿ ಹಾಕುವ ಈ ಅಪರೂಪದ ಅತಿಥಿ, ಸೀದಾ ವಧು ವರರು ನಿಂತ ವೇದಿಕೆಗೆ ತೆರಳಿ ಅಲ್ಲಿಯೇ ಮುಂಭಾಗದಲ್ಲಿಯೇ ಕೆಲ ಹೊತ್ತು ಕುಳಿತುಕೊಳ್ಳುತ್ತದೆ. ವಧು-ವರರ ಮುಂದೆಯೇ ಕುಳಿತು ಫೋಟೋಗೂ ಪೋಸ್ ಕೊಡುತ್ತೆ. ಅಷ್ಟೇ ಅಲ್ಲ ಮದುವೆ ಮಂಟಪದ ಎದುರಿನ ಕುರ್ಚಿಗಳಲ್ಲಿ ಕುಳಿತು ಕಾಲ ಕಳೆಯುತ್ತದೆ. ಮದುವೆಗಳು ಇದ್ದಾಗ ಮಾತ್ರ ಕಲ್ಯಾಣ ಮಂಟಪದತ್ತ ಮುಖ ಮಾಡುವ ಕಪಿರಾಯನ ಕಂಡು ಜನರು ನಿಬ್ಬೆರಗಾಗಿದ್ದಾರೆ. ಆದರೆ ಇದು ಯಾರಿಗೂ ತೊಂದರೆ ಕೊಡುವುದಿಲ್ಲ. ಈ ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದ್ರು ಅವರ ಕೈಗೆ ಮಾತ್ರ ಸಿಗ್ತಿಲ್ಲ ಎಂದು ವ್ಯವಸ್ಥಾಪಕ ಮುರುಗೇಶ್ ಕುಂದರಗಿ ಹೇಳುತ್ತಾರೆ.